ಭಾರತ ಸಂವಿಧಾನದ ಇತಿಹಾಸ

ಸಂಪುಟ ಸಮಿತಿ
ಎರಡನೆಯ ಮಹಾಯುದ್ಧವು ಮೇ ೯, ೧೯೪೫ರಂದು ಯೂರೋಪಿನಲ್ಲಿ ಮುಕ್ತಾಯಗೊಂಡಿತು. ಅದೇ ವರ್ಷದ ಜುಲೈನಲ್ಲಿ, ಯುನೈಟೆಡ್ ಕಿಂಗ್‍ಡಮ್ನಲ್ಲಿ ಹೊಸ ಸರಕಾರವು ಅಧಿಕಾರಕ್ಕೆ ಬಂದಿತು. ಈ ಹೊಸ ಸರಕಾರವು ತನ್ನ ಭಾರತೀಯ ಧೋರಣೆ (ಇಂಡಿಯನ್ ಪಾಲಿಸಿ)ಯನ್ನು ಘೋಷಿಸಿ, ಸಂವಿಧಾನದ ಕರಡನ್ನು ತಯಾರು ಮಾಡಲು ಸಮಿತಿಯನ್ನು ರಚಿಸಲು ನಿರ್ಧರಿಸಿತು. ಮೂವರು ಬ್ರಿಟೀಷ್ ಮಂತ್ರಿಗಳ ತಂಡವೊಂದು, ಭಾರತದ ಸ್ವಾತಂತ್ರ್ಯದ ಬಗ್ಗೆ, ಪರಿಹಾರ ಹುಡುಕಲು ಭಾರತಕ್ಕೆ ಬಂದಿತು. ಈ ತಂಡವನ್ನು 'ಸಂಪುಟ ಸಮಿತಿ' (Cabinet Mission) ಎಂದು ಕರೆಯಲಾಯಿತು.

ಸಂವಿಧಾನದ ರೂಪುರೇಷೆಗಳನ್ನು ಚರ್ಚಿಸಿದ ಈ ಸಮಿತಿಯು, ಕರಡು ಸಂವಿಧಾನ ರಚನಾ ಸಮಿತಿಯು ಅನುಸರಿಸಬೇಕಾದ ಕಾರ್ಯವಿಧಾನದ ಕೆಲವು ವಿವರಗಳನ್ನು ಸ್ಪಷ್ಟಪಡಿಸಿತು. ಬ್ರಿಟಿಷ್ ಭಾರತದ ಪ್ರಾಂತ್ಯಗಳ ೨೯೬ ಸ್ಥಾನಗಳಿಗೆ ಚುನಾವಣೆಗಳು ೧೯೪೬ರ ಜುಲೈ - ಅಗಸ್ಟ್ ಹೊತ್ತಿಗೆ ಮುಗಿದವು. ಆಗಸ್ಟ್ ೧೫, ೧೯೪೭ರಂದು ಭಾರತದ ಸ್ವಾತಂತ್ರ್ಯದೊಂದಿಗೆ ಸಂವಿಧಾನರಚನಾ ಸಮಿತಿಯು ಸಂಪೂರ್ಣವಾಗಿ ಸ್ವಾಯತ್ತ ಸಭೆಯಾಗಿ ಮಾರ್ಪಟ್ಟಿತು. ಈ ಸಮಿತಿಯು ಡಿಸೆಂಬರ್ ೯, ೧೯೪೬ರಂದು ತನ್ನ ಕೆಲಸವನ್ನು ಆರಂಭಿಸಿತು.

ಸಂವಿಧಾನ ರಚನಾಸಭೆ

ಭಾರತದ ಜನತೆ ಪ್ರಾಂತೀಯ ಸಭೆಗಳ ಸದಸ್ಯರನ್ನು ಆರಿಸಿ, ಆ ಸಭೆಗಳು ಸಂವಿಧಾನರಚನಾ ಸಭೆಯ ಸದಸ್ಯರನ್ನು ಆರಿಸಿದರು.

ಸಂವಿಧಾನ ರಚನಾಸಭೆಯಲ್ಲಿ ಭಾರತದ ವಿವಿಧ ಪ್ರದೇಶಗಳಿಗೆ ಹಾಗೂ ಸಮುದಾಯಗಳಿಗೆ ಸೇರಿದ ಸದಸ್ಯರು ಇದ್ದರು. ಬೇರೆ ಬೇರೆ ರಾಜಕೀಯ ವಿಚಾರಧಾರೆಗಳನ್ನು ಪ್ರತಿನಿಧಿಸುವ ಸದಸ್ಯರೂ ಅಲ್ಲಿ ಇದ್ದರು. ಜವಾಹರ್‍ಲಾಲ್ ನೆಹರೂ, ರಾಜೇಂದ್ರ ಪ್ರಸಾದ್, ಸರ್ದಾರ್ ಪಟೇಲ್, ಮೌಲಾನಾ ಅಬುಲ್ ಕಲಂ ಆಝಾದ್ ಮತ್ತು ಶ್ಯಾಮ್ ಪ್ರಸಾದ್ ಮುಖರ್ಜಿ ಇವರುಗಳು ಸಭೆಯ ಚರ್ಚೆಗಳಲ್ಲಿ ಭಾಗವಹಿಸಿದ ಕೆಲವು ಪ್ರಮುಖ ವ್ಯಕ್ತಿಗಳಾಗಿದ್ದರು. ಪರಿಶಿಷ್ಟ ವರ್ಗಗಳಿಗೆ ಸೇರಿದ ಮೂವತ್ತಕ್ಕೂ ಹೆಚ್ಚು ಸದಸ್ಯರಿದ್ದರು ಆಂಗ್ಲೋ-ಇಂಡಿಯನ್ ಸಮುದಾಯವನ್ನು ಫ್ರಾಂಕ್ ಆಂಟನಿ ಅವರೂ ಪಾರ್ಸಿ ಜನರನ್ನು ಎಚ್.ಪಿ. ಮೋದಿ ಅವರೂ ಪ್ರತಿನಿಧಿಸಿದ್ದರು. ಆಂಗ್ಲೊ-ಇಂಡಿಯನ್ನರ ಹೊರತಾದ ಎಲ್ಲ ಕ್ರೈಸ್ತರನ್ನು ಪ್ರತಿನಿಧಿಸಿದ ಖ್ಯಾತ ಕ್ರೈಸ್ತರಾದ ಹರೇಂದ್ರ ಕುಮಾರ್ ಮುಖರ್ಜಿಯವರು ಅಲ್ಪಸಂಖ್ಯಾತರ ಸಮಿತಿಯ ಅಧ್ಯಕ್ಷರಾಗಿ ಇದ್ದರು. ಸಂವಿಧಾನ ತಜ್ಞರಾದ ಅಲ್ಲಾಡಿ ಕೃಷ್ಣಸ್ವಾಮಿ, ಬಿ.ಆರ್.ಅಂಬೇಡ್ಕರ್ , ಬಿ.ಎನ್. ರಾಜು ಮತ್ತು ಕೆ.ಎಂ. ಮುನ್ಶಿಯವರೂ ಸಭೆಯ ಸದಸ್ಯರಾಗಿದ್ದರು. ಸರೋಜಿನಿ ನಾಯ್ಡು ಮತ್ತು ವಿಜಯಲಕ್ಷ್ಮಿ ಪಂಡಿತ್ ಪ್ರಮುಖ ಮಹಿಳಾ ಸದಸ್ಯರಾಗಿದ್ದರು. ಡಾ. ಸಚ್ಚಿದಾನಂದ ಸಿನ್ಹಾರವರು ಸಂವಿಧಾನರಚನಾಸಭೆಯ ತಾತ್ಕಲಿಕ ಅಧ್ಯಕ್ಷರಾಗಿದ್ದರು. ನಂತರ, ಡಾ.ರಾಜೇಂದ್ರ ಪ್ರಸಾದ್ ಅವರು ಅಧ್ಯಕ್ಷರಾಗಿಯೂ ಬಿ.ಆರ್.ಅಂಬೇಡ್ಕರ್ ಅವರು ಕರಡು ಸಮಿತಿ ಅಧ್ಯಕ್ಷರಾಗಿಯೂ ಆಯ್ಕೆಯಾದರು.

ಸಂವಿಧಾನ ರಚನಾಸಭೆಯು ಎರಡು ವರ್ಷ ೧೧ ತಿಂಗಳು ೧೮ ದಿನಗಳ ಕಾಲದ ಅವಧಿಯಲ್ಲಿ ೧೬೬ ದಿನ ಸಮಾವೇಶಗೊಂಡಿತು. ಈ ಸಮಾವೇಶಗಳಿಗೆ ಸಾರ್ವಜನಿಕರಿಗೂ ಹಾಗು ಪತ್ರಕರ್ತರಿಗೂ ಪ್ರವೇಶವಿತ್ತು

ಆಶಯಗಳ ನಿಷ್ಕರ್ಷೆ(ಧೇಯಗಳ ನಿರ್ಣಯ)
ಸಂವಿಧಾನದ ಮೂಲ ತತ್ವಗಳನ್ನು ಜವಹರಲಾಲ್ ನೆಹರುರವರು ತಮ್ಮ ಆಶಯಗಳ ನಿಷ್ಕರ್ಷೆ ಯಲ್ಲಿ ಸ್ಪಷ್ಟಪಡಿಸಿದ್ದಾರೆ :

ಭಾರತವು ಸ್ವತಂತ್ರ, ಸಾರ್ವಭೌಮ, ಗಣರಾಜ್ಯ.;
ಭಾರತವು ಹಿಂದಿನ ಬ್ರಿಟಿಷ್ ಭಾರತದ ಪ್ರದೇಶಗಳು, ಭಾರತದ ರಾಜ್ಯಗಳು ಮತ್ತು ಭಾರತವನ್ನು ಸೇರಬಯಸುವ ಇತರ ಪ್ರದೇಶಗಳ ಒಕ್ಕೂಟ.
ಒಕ್ಕೂಟವನ್ನು ಸೇರುವ ಪ್ರದೇಶಗಳು ಸ್ವಾಯತ್ತ ಘಟಕಗಳಾಗಿದ್ದು ಒಕ್ಕೂಟಕ್ಕೆ ಒಪ್ಪಿಸಿದ ಅಧಿಕಾರಗಳ ಹೊರತಾಗಿ ಸರಕಾರದ ಮತ್ತು ಆಡಳಿತದ ಎಲ್ಲ ಅಧಿಕಾರಗಳನ್ನು ಮತ್ತು ಕರ್ತವ್ಯಗಳನ್ನು ಚಲಾಯಿಸಬಲ್ಲವಾಗಿರುತ್ತವೆ ;
ಸ್ವತಂತ್ರ ಸಾರ್ವಭೌಮ ಭಾರತದ ಮತ್ತು ಅದರ ಸಂವಿಧಾನದ ಎಲ್ಲಾ ಅಧಿಕಾರಗಳು ಮತ್ತು ಅಧಿಕರಣಗಳು ಭಾರತದ ಪ್ರಜೆಗಳಿಂದ ದೊರೆಯಲ್ಪಡುತ್ತವೆ;
ಭಾರತದ ಎಲ್ಲಾ ಪ್ರಜೆಗಳಿಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ; ಕಾನೂನಿನ ಮುಂದೆ ಸಮಾನ ಸ್ಥಾನಮಾನ ಮತ್ತು ಅವಕಾಶಗಳು; ಮತ್ತು ಕಾನೂನು ಮತ್ತು ಸಾರ್ವಜನಿಕ ಸದಾಚಾರದ ಮಿತಿಗಳಲ್ಲಿನ ಮಾತು, ಅಭಿವ್ಯಕ್ತಿ, ನಂಬಿಕೆ, ಭಕ್ತಿ, ಆರಾಧನೆ, ಉದ್ಯೋಗ, ಸಂಗ-ಸಹವಾಸ ಮತ್ತು ಕೃತ್ಯಗಳ ಮೂಲಭೂತ ಹಕ್ಕುಗಳು ಆಶ್ವಾಸಿತವಾಗಿದೆ ಮತ್ತಿವುಗಳು ಒದಗಿಸಲ್ಪಡುತ್ತವೆ;
ಅಲ್ಪಸಂಖ್ಯಾತರಿಗೆ, ಹಿಂದುಳಿದ ಮತ್ತು ಆದಿವಾಸಿ ಪ್ರಾಂತ್ಯಗಳಿಗೆ, ದೀನ ಮತ್ತು ಹಿಂದುಳಿದ ವರ್ಗಗಳಿಗೆ ಸಮರ್ಪಕ ಸಂರಕ್ಷಣೆಗಳು ಒದಗಿಸಲಾಗುತ್ತದೆ;
ಭಾರತ ಗಣರಾಜ್ಯದ ಭೂಮಿ, ಸಾಗರ ಮತ್ತು ವಾಯು ಪರಿಮಿತಿಗಳ ಸಾರ್ವಭೌಮತೆಯನ್ನು ಎಲ್ಲಾ ನಾಗರೀಕ ದೇಶಗಳಂತೆ ನ್ಯಾಯವಾಗಿ ಮತ್ತು ಕಾನೂನಿಗನುಸಾರವಾಗಿ ಕಾಪಾಡಲ್ಪಡುತ್ತದೆ;
ಈ ದೇಶವು ಲೋಕಶಾಂತಿ ಮತ್ತು ಮನುಕುಲದ ಉದ್ಧಾರಕ್ಕೆ ತನ್ನ ಸಂಪೂರ್ಣ ಮತ್ತು ಮನಸಾರ ಪ್ರಯತ್ನವನ್ನು ಮಾಡುವುದು.

Notes By : Kannada Kanaja Android App
(ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸ್ವಯಂ ತಯಾರಿಗಾಗಿ ಇಂದೇ "Kannada Kanaja" ಆಂಡ್ರಾಯ್ಡ್ ಆಪ್ ಡೌನ್‌ಲೋಡ್ ಮಾಡಿಕೊಳ್ಳಿ )
App Download Link
https://play.google.com/store/apps/details?id=com.app.kkmwqsomnbaruonjfshgtxqbldlvpvjhzaeiitxey

Post a Comment

0 Comments